ಪುರಂದರ ದಾಸರು ಕನ್ನಡಿಗರ ಹೆಮ್ಮೆಯ ಪುರುಷರು ಮತ್ತು ಲೋಕ ಪ್ರಿಯರು. ಧರೆಗಿಳಿದು ಬಂದ ನಾರದ ಮುನಿಗಳು, ಕರ್ನಾಟಕ ಸಂಗೀತ ಪಿತಾಮಹರು.
ದಾಸರು ತಮ್ಮದೇ ಆದ ಶೈಲಿಯಲ್ಲಿ ವೇದ, ಉಪನಿಷತ್ತು, ಭಗವದ್ಗೀತೆ, ಪುರಾಣಗಳ ತತ್ವಗಳನ್ನು ಸುಲಭ ಮಾರ್ಗದಲ್ಲಿ, ನಮ್ಮ ಸಂಸ್ಕೃತಿಗೆ ತಕ್ಕಂತೆ, ಸರ್ವ ಕಾಲಕ್ಕೂ ಅನುಗುಣವಾಗುವಂತೆ, ಜನಸಾಮಾನ್ಯರಿಗೂ ಅರ್ಥವಾಗುವಂತೆ ಕೀರ್ತನೆಗಳಲ್ಲಿ, ಪದಗಳಲ್ಲಿ, ಉಗಾಭೋಗಗಳಲ್ಲಿ, ಮುಂಡಿಗೆಗಳಲ್ಲಿ ಮತ್ತು ಸುಳಾದಿಗಳಲ್ಲಿ ತಿಳಿಸಿದ್ದಾರೆ.
ನಿತ್ಯ ಜೀವನದಲ್ಲಿ ಆಧ್ಯಾತ್ಮವನ್ನು ಕಂಡುಕೊಂಡು, ದೇವರ ಚಿಂತನೆ ಮಾಡಿಕೊಂಡು, ಸಂಸಾರದಲ್ಲಿದ್ದುಕೊಂಡು ಸಾಧನೆ ಮಾಡುವ ಮಾರ್ಗವನ್ನು ತೋರಿಸಿದ್ದಾರೆ.
ಇವುಗಳನ್ನು ಒಳ್ಳೆಯ ಕಾವ್ಯ ರೂಪದಲ್ಲಿಒಳ್ಳೆಯ ಪ್ರಾಸದಲ್ಲಿ ಒಳ್ಳೊಳ್ಳೆಯ ರಾಗ ತಾಳ ಗಳಲ್ಲಿ ಓದಲು ಇಷ್ಟವಾಗುವಂತೆ, ಕೇಳಲು ಇಂಪಾಗಿರುವಂತೆ, ಅನುಗಾಲವೂ, ಸರ್ವರಿಗೂ ಒಪ್ಪುವಂತೆ ಸುಲಭವಾಗಿ ಅರ್ಥೈಸಿಕೊಳ್ಳುವಂತೆ ಹೇಳಿದ್ದಾರೆ.
ಇವರು ಹಾಕಿ ಕೊಟ್ಟಿರುವ ಸಾಹಿತ್ಯ ಮತ್ತು ಸಂಗೀತ ಮಾರ್ಗ ಮುಂದಿನ ಪೀಳಿಗೆಗಳಿಗೆ ದಾರಿ ದೀಪವಾಗಿದೆ.
ಇವರ ಹೆಜ್ಜೆ ಗುರುತನ್ನ ಅನುಸರಿಸಿ ಬಂದಂತಹ ಮುಂದಿನ ವಾಗ್ಗೇಯಕಾರರ ರಚನೆಗಳನ್ನ ಗಮನಿಸಿದಾಗ ಇವರು ಕೊಟ್ಟಂತಹ ಕೊಡುಗೆ ಅಪಾರ ಎಂದು ನಮಗೆ ಚೆನ್ನಾಗಿ ಮನದಟ್ಟಾಗುತದೆ.
ಗುರುಗಳಾದ ಶ್ರೀ ವ್ಯಾಸರಾಯರು ಅವರ ಸಾಹಿತ್ಯವನ್ನು ಉಪನಿಷತ್ತಿಗೆ ಹೋಲಿಸಿ ಅದಕ್ಕೆ “ಪುರಂದರ ಉಪನಿಷತ್” ಎಂದು ಹೆಸರಿಟ್ಟಿದ್ದರು ಹಾಗೂ ತಮ್ಮ ವ್ಯಾಸಪೀಠದಲ್ಲಿಟ್ಟಿದ್ದರು.
ಶ್ರೀವಿಜಯದಾಸರು *ಗುರು ಪುರಂದರದಾಸರೇ ನಿಮ್ಮ ಚರಣಕಮಲವ ನಂಬಿದೆ, ಗರುವ ರಹಿತರ ಮಾಡಿ ಎಮ್ಮನು ಪೊರೆವ ಭಾರವು ನಿಮ್ಮದೆ – ಎಂದು ಬೇಡಿದ್ದಾರೆ. ನಾವೂ ದಾಸ ಶ್ರೇಷ್ಠರಾದ ದಯಾನಿಧಿಗಳನ್ನು ಸ್ಮರಿಸೋಣ.
ಅವರ ಪ್ರತಿಪಾದನೆಗೆ ಶ್ರೀ ಮಧ್ವಾಚಾರ್ಯರ ದ್ವೈತ ಸಿದ್ಧಾಂತವೇ ಪ್ರಮುಖವಾದ ಅಡಿಗಲ್ಲು.
ಶ್ರೀ ಹರಿಯು ಸರ್ವೋತ್ತಮನೆಂದೂ ಮತ್ತು ಶ್ರೀ ಕೃಷ್ಣನಲ್ಲಿ ಅಂದರೆ ಪರಮಾತ್ಮನಲ್ಲಿ ಜ್ಞಾನ, ಭಕ್ತಿ, ಅನುರಾಗ, ನಿಶ್ಚಲವಾದ ಸ್ನೇಹ, ಪ್ರೀತಿಯೇ ಸಾಧನೆಯ ದಿವ್ಯ ಮಾರ್ಗವಾಗಿದೆಯೆಂದು ತೋರಿಸಿದ್ದಾರೆ.
ಇದರಿಂದ ಶ್ರೀ ಸಾಮನ್ಯನು ಶುದ್ಧ ಜೀವನವನ್ನು ಇನ್ನೊಬ್ಬರಿಗೆ ಭಾರವಾಗದ ರೀತಿಯಲ್ಲಿ, ಸುಗಮವಾಗಿ ಮತ್ತು ನೆಮ್ಮದಿಯಿಂದ ಬದುಕಬಹುದೆಂದು ಸಾರಿ ಸಾರಿ ಹೇಳಿದ್ದಾರೆ.
*ಶ್ರೀಹರಿ* ಯನ್ನು ನೆನೆದರೆ ಎಲ್ಲ ದೋಷವೂ ದೂರ ಎಂದು ಸಾರಿದ ಮಹಾನುಭಾವರಿಗೆ ನಮ್ಮ *ಶತಕೋಟಿ ನಮನ*….