ಶ್ರೀ ಪುರಂದರದಾಸ ಸೇವಾ ಮಂಡಳಿಯು ೧೯೫೪ ಫೆಬ್ರವರಿ ೭ ರಂದು (07.02.1954) ಹಂಪಿಯಲ್ಲಿಯ, ಪುರಂದರ ದಾಸರು ಹರಿಪುರ ಸೇರಿದ ಸ್ಥಳವಾದ (ದೊರಕಿರುವ ಮಾಹಿತಿಗಳ ಪ್ರಕಾರ) ಶ್ರೀ ವಿಜಯ ವಿಠ್ಠಲ ದೇವಸ್ಥಾನದಲ್ಲಿ ಸ್ಥಾಪನೆಗೊಂಡಿತು.
ಅಪಾರ ಮಹಿಮೆ ಉಳ್ಳ, ಕನ್ನಡ ನಾಡಿನ, ಕನ್ನಡ ಸಂಸ್ಕೃತಿಯ, ನಮ್ಮೆಲ್ಲರ ಭಾಗ್ಯನಿಧಿಯಾದ, ದಾಸ ಶ್ರೇಷ್ಠರಾದ ಶ್ರೀ ಪುರಂದರ ದಾಸರ ಸ್ಮರಣೆಯನ್ನು, ಅವರ ಕಾರ್ಯ ಕ್ಷೇತ್ರವಾದ ಹಂಪಿ - ಹೊಸಪೇಟೆಗಳಲ್ಲಿ, ವಿಜೃಂಭಣೆಯಿಂದ ಆಚರಿಸಬೇಕೆಂಬ ಸದುದ್ದೇಶದಿಂದ ಶ್ರೀ ದಾಸರಾಯರ ಆರಾಧನಾ ಸಂದರ್ಭದಲ್ಲಿ, ನಮ್ಮ ಮಂಡಳಿಯು ಪ್ರಾರಂಭವಾಯಿತು. "ಕನ್ನಡ ಕುಲಪುರೋಹಿತ" ಎಂದು ಪ್ರಸಿದ್ಧರಾದ ಧಾರವಾಡದ ಶ್ರೀ ಆಲೂರ್ ವೆಂಕಟರಾವ್ ಅವರು ಮೊದಲ ಅಧ್ಯಕ್ಷರಾಗಿದ್ದರು.
ಶ್ರೀ ಪುರಂದರದಾಸ ಸೇವಾ ಮಂಡಳಿಯನ್ನು ಸ್ಥಾಪಿಸುವಲ್ಲಿ, ಬೆಳಸುವಲ್ಲಿ, ಪ್ರತೀ ವರ್ಷ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಮತ್ತು ಇನ್ನಿತರ ಸಂಬಂಧಿತ ಕಾರ್ಯಗಳಲ್ಲಿ ಕುಟುಂಬದ ಹಿರಿಯರಾದ ನನ್ನ ತಾತ ಮತ್ತು ತಂದೆಯವರ, ಬಳಗದವರ ಮತ್ತು ಆಪ್ತರ ಶ್ರಮ ಶ್ಲಾಘನೀಯ.
ಪ್ರಸ್ತುತ ಮಂಡಳಿಯು ಪ್ರಥಮ ಕೆಲಸ ಮಾಡಿದ್ದು ಹಂಪಿಯಲ್ಲಿರುವ ಪ್ರಸಿದ್ಧವಾದ ಪುರಂದರ ಮಂಟಪದ ಜೀರ್ಣೋದ್ಧಾರ. ತುಂಗಭದ್ರಾ ನದಿಯ ಪ್ರವಾಹಗಳ ಹೊಡೆತಗಳಿಂದ, ನಿರ್ವಹಣೆಗಳಿಲ್ಲದೆ ಶಿಥಲಗೊಂಡಿತ್ತು. ಕೇಂದ್ರ ಸರಕಾರದ ಪ್ರಾಚ್ಯ ವಸ್ತು ಇಲಾಖೆಯ ಅನುಮತಿ ಪಡೆದನಂತರ ಮಂಟಪದ ಜೀರ್ಣೋದ್ಧಾರ ಕಾರ್ಯ ಪ್ರಾರಂಭ ಮಾಡಿ ೧೯೫೯ ಮೇ ೬ ರಂದು (06.05.1959) ಪೂರ್ಣಗೊಂಡಿತು. ಆಗಿನ ಅಧ್ಯಕ್ಷರಾಗಿದ್ದ ತಟ್ಟಿ ಕೃಷ್ಣರಾಯರ ಮತ್ತು ಸಂಗಡಿಗರ ನಿರಂತರ ಪರಿಶ್ರಮದಿಂದ ಈಗಿನ ಪುರಂದರ ಮಂಟಪ ಸರಿಯಾಯಿತು. ಅವರು, ಪುರಂದರ ಮಂಟಪದಲ್ಲಿ ಇದರ ಬಗ್ಗೆ ಒಂದು ಶಿಲಾ ಶಾಸನವನ್ನು ಬರೆಸಿದ್ದಾರೆ. ಈ ಶಾಸನವನ್ನು ಅಲ್ಲಿಗೆ ಹೋದವರು ಇಂದಿಗೂ ನೋಡಬಹುದು. ಇದರ ಫೋಟೋವನ್ನು ನಮ್ಮ ವೆಬ್ಸೈಟ್ ನ ಇನ್ನೊಂದು ವಿಭಾಗದಲ್ಲಿ ಹಾಕಲಾಗಿದೆ.
ಇಂದಿಗೂ ಮಂಡಳಿಯ ಕಡೆಯಿಂದ ಪ್ರತೀ ವರ್ಷವೂ ಪುರಂದರ ದಾಸರ ಆರಾಧನಾ ಕಾರ್ಯಕ್ರಮಗಳು ನಡೆಯುತ್ತಿವೆ. ಇದು ನಮ್ಮೆಲ್ಲರ ಹೆಮ್ಮೆ. ಶ್ರೀ ದಾಸರಾಯರ ೪೦೦ನೇ ಪುಣ್ಯ ತಿಥಿಯ ಸಮಾರಂಭದ ಅಂಗವಾಗಿ ಬಿಡುಗಡೆಯಾದ "ಪುರಂದರ ನಮನ" ಸಂಚಿಕೆಯಲ್ಲಿ ನಮ್ಮ ಮಂಡಳಿಯು "ನಡೆದುಬಂದ ದಾರಿ" ಎಂಬ ಶೀರ್ಷಿಕೆಯಡಿಯಲ್ಲಿ ಸವಿಸ್ತಾರವಾಗಿ ಎಲ್ಲಾ ವಿಷಯಗಳನ್ನು ತಿಳಿಸಲಾಗಿದೆ.